ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು ನಾಗರ ಪಂಚಮಿ , ವರಮಹಾಲಕ್ಷ್ಮಿ ಹಬ್ಬ. ಹಬ್ಬಎಂದೊಡನೆ ಥಟ್ಟನೆ ನೆನಪಾಗುವುದು ಗೆಳತಿ ಪದ್ಮಾವತಿಯ ನೆನಪು .ಪಿ.ಯು.ಸಿ ಯಿಂದ ಗೆಳೆತನ .ನಮ್ಮಲ್ಲಿ ಮೊದಲು ಮದುವೆಯಾದದ್ದೇ ಅವಳಿಗೆ . ನನ್ನ ಓದು ಮುಂದುವರೆದಿತ್ತು .ಇದ್ದುರಲ್ಲೇ ಗಂಡನ ಮನೆ .ಮದುವೆಯಾದ ಮೇಲೂ ಗೆಳತಿಯರಿಂದ ದೂರವಾಗಿರಲಿಲ್ಲ .ಅದರಲ್ಲೂ ಹಾಸ್ಟೆಲ್ ನಲ್ಲಿ ಇರುತ್ತಿದ್ದ ನನ್ನ ಮೇಲೆ ವಿಶೇಷ ಪ್ರೀತಿ .ಮನೆಯಲ್ಲಿ ಏನೇ ಹಬ್ಬ ,ಹುಣ್ಣಿವೆ ,ಅಮವಾಸೆ , ಇದ್ದರೂ ಕೂಡಾ ನನಗೆ ಊಟದ ಕ್ಯಾರಿಯರ್ ತಂದು ಕೊಟ್ಟು ಹೋಗುತ್ತಿದ್ದಳು .ಒಟ್ಟಿನಲ್ಲಿ ಮನೆಯ ಊಟ ನನಗೂ ಸಿಗಲಿ ಎಂಬ ಅಮ್ಮನಂತ ಗೆಳತಿ . ನೀರಿನಂತಹ ಸ್ವಭಾವ ,ಯಾವ ಪಾತ್ರೆಗೆ ಹಾಕಿದರೂ ಹೊಂದಿಕೊಳ್ಳುವಂತಹ ಗುಣ ..ಅವಳಿಗೆ ಯಾವುದೇ ಹೆಚ್ಚಿನ ಆಸೆಗಳಿರಲಿಲ್ಲ .ಇದ್ದದ್ದು ಒಂದೇ ಆಸೆ ಗಂಡನ ಪ್ರೀತಿ . ನಾಗರಪಂಚಮಿಯ ರೊಟ್ಟಿ ಹಬ್ಬದ ದಿನ ಎಳ್ಳು ಹಚ್ಚಿ ಮಾಡಿದ ಜೋಳದ ರೊಟ್ಟಿ , ಸಜ್ಜಿ ರೊಟ್ಟಿ ,ಶೆಂಗಾ ಚಟ್ನಿ , ಗುರೆಳ್ಳು ಚಟ್ನಿ , ಅಗಸಿ ಚಟ್ನಿ ,ಕೆಂಪಿಂಡಿ (ಕೆಂಪು ಮೆಣಸಿನಕಾಯಿ ಚಟ್ನಿ ). ಎಣ್ಣಿಗಾಯಿ , ಮೊಳಕೆಯೊಡೆದು ಮಾಡಿದ ಹೆಸರು ಕಾಳು , ಮಡಕೆ ಕಾಳಿನ ಪಲ್ಯೆ , ಮೊಸರು ಬಜ್ಜಿ …ಎಲ್ಲ ತಂದು ನಂಗೆ ಮುಟ್ಟಿಸಿ ಹೋಗುತ್ತಿದ್ದಳು. ಮತ್ತೆ ಪಂಚಮಿ ಉಂಡಿಗಳು . ಸಿಹಿ ಉಂಡೆಗಳನ್ನು ವಾರಗಟ್ಟಲೆ ಇಟ್ಟುಕೊಂಡು ತಿಂತಾಯಿದ್ದೆ . ಹೀಗೆಲ್ಲ ಊಟ ತಿಂಡಿಯನ್ನು ಅವಳ ಗಂಡನೇ ಹಾಸ್ಟೆಲ್ ಗೆ ತಂದು ಕೊಟ್ಟು ಹೋಗ್ತಾ ಇದ್ದ . ಅವನು ಬಂದರೆ ನೋಡಲು ಉಳಿದ ಹುಡುಗಿಯರೂ ಹಾಜರ್ !! ನಾನೂ ಎಷ್ಟೋ ಸಲ ಅವಳಿಗೆ ತಮಾಷೆ ಮಾಡ್ತಾ ಇದ್ದೆ . ಪದ್ದಿ ನಿನ್ನ ಗಂಡ ನೋಡೋಕೆ ಹ್ಯಾಂಡಸಮ್ ಆಗಿದ್ದಾನೆ .ಹುಡುಗಿಯರ ಹಾಸ್ಟೆಲ್ಗೆ ಜಾಸ್ತಿ ಕಳಿಸ್ಬೇಡ ,ಹುಷಾರು ನೋಡು ಮತ್ತೆ .ಇದನ್ನು ಕೇಳಿ ಅವಳು ಕುಲು ಕುಲು ನಗ್ತಾ ಇದ್ದಳು .ನೀ ಇದ್ದೀಯಲ್ಲ ಬಿಡು ಸಂಭಾಳಿಸೋಕೆ ಅಂದುಬಿಡುತ್ತಿದ್ದಳು .ಅಷ್ಟೊಂದು ನಂಬಿಕೆ ಅವಳಿಗೆ .ಎಲ್ಲರನ್ನು ನಂಬುವ ಅಮಾಯಕ ಹುಡುಗಿ .ಮೊದಲ ರಾತ್ರಿ ಬಗ್ಗೆ ಹೇಳಿಕೊಂಡು ಬೊಗಸೆ ಕಣ್ಣುಗಲ್ಲಿ ನಕ್ಕ ಆವಳ ಮುಖ ಇನ್ನೂ ನನ್ನ ಕಣ್ಣೆದುರಿಗಿದೆ . ವರಮಹಾಲಕ್ಶ್ಮಿ ಹಬ್ಬಕ್ಕೆ ಮನೆಗೆ ಎಲ್ಲರನ್ನು ಕರೆದು ಹೋಳಿಗೆ ಮಾಡಿ ಊಟ ಮಾಡಿಸುತ್ತಿದ್ದಳು .ನನಗೆ ಹಿಂತಿರುಗುವಾಗ ಹೋಳಿಗೆ ಹಾಗು ಸಿಹಿತಿಂಡಿಗಳ ಪಾರ್ಸೆಲ್ . ಯಾವ ಜನ್ಮದ ಋಣವೋ ಕಾಣೆ ನನಗಂತೂ ಎರಡು ವರ್ಷಗಳ ಕಾಲ ನನ್ನ ಹೊಟ್ಟೆ ತಂಪಾಗಿರಿಸಿದ್ದ ತಾಯಿ ಅವಳು . ಮಧ್ಯದಲ್ಲಿ ಕೆಲವು ದಿನ ಏನೂ ಕಳಿಸಿರಲಿಲ್ಲ . ಪರೀಕ್ಷೆ ಹತ್ತಿರವಾಗಿದ್ದರಿಂದ ನಾನೂ ಹೋಗಿರಲಿಲ್ಲ .ಆಮೇಲೆ ಒಂದು ದಿನ ಅವಳ ಗಂಡನೆ ಬಿರಿಯಾನಿ ತಂದು ಕೊಟ್ಟು ಇನ್ನು ಮೇಲೆ ನಿನ್ನ ಗೆಳತಿ ಬರುವುದಿಲ್ಲ, ಬೇಕೆಂದರೆ ನೀನೇ ಬರ್ಬೇಕು ಮನೆಗೆ ಎಂದಿದ್ದ .ಗಾಬರಿಯಿಂದ ಏನಾಯ್ತು ? ಯಾಕೆ ? ಅಂತ ಕೇಳಿದರೆ ತುಂಟ ಮುಗುಳ್ನಕ್ಕು ನೀನೆ ಬಂದು ಮಾತಾಡು ಎಂದು ಹೋಗಿದ್ದ . ಆತಂಕದಿಂದ ಮನೆಗೆ ಹೋದಾಗ ಅಚ್ಚರಿಯೊಂದು ಕಾದಿತ್ತು, ಪದ್ದಿ ತಾಯಾಗುವಳಿದ್ದಳು .ಮನೆಮಂದಿಗೆಲ್ಲ ಸಂತೋಷ .ಅವಳ ಕುಟುಂಬದ ಜೊತೆ ಬಂದೇ ನಮಾಜ್ ದರ್ಗಾ , ಶರಣಬಸವೇಶ್ವರ ಅಪ್ಪನ ಮಠ .ದೇವಸ್ಥಾನ ಅಂತ ಎಲ್ಲ ಕಡೆ ಸುತ್ತಿದ್ದೇನೆ .ಎಲ್ಲಾ ಚೆನ್ನಾಗಿ ನಡಿತಿದೆ ಅನ್ನುವಾಗ ಹಠಾತ್ತನೆ ಅವಳಿಗೆ ಗರ್ಭಪಾತವಾಗಿ ತೀವ್ರ ರಕ್ತಸ್ರಾವದಿಂದ ತೀರಿಹೋದಳು , ಎಷ್ಟೋದಿನಗಳವರೆಗೆ ನನಗೆ ಆ ಶಾಕ್ ನಿಂದ , ಆವಳ ನೆನಪಿನಿಂದ ಹೊರಬರುವದಕ್ಕೆ ಸಾಧ್ಯವಾಗಿರಲಿಲ್ಲ . ತುಂಬ ವರ್ಷಗಳ ನಂತರ ಒಂದಿನ ಪದ್ದಿಯ ಗಂಡ ನಂಗೆ ಫೋನ್ ಮಾಡಿ ಬಿಕ್ಕಳಿಸಿದ್ದ , ಪದ್ದಿಗೆ ಗರ್ಭಪಾತವಾಗುವಂತೆ ಮದ್ದು ಕೊಡಲಾಗಿತ್ತೆಂದು , ಕೊಟ್ಟವರು ತನ್ನ ಸೋದರಿಯೇ ಎಂದು ಹೇಳಿದ್ದ . ಪದ್ದಿಯ ನಾದಿನಿಗೆ ಮಕ್ಕಳಾಗಿಲ್ಲವೆಂದು ತವರು ಮನೆಯಲ್ಲಿಯೇ ಉಳಿದಿದ್ದಳು . ಅದರೆ ಹೊಟ್ಟೆಕಿಚ್ಚು ಎನ್ನುವದು ಎಷ್ಟೊಂದು ಕೆಟ್ಟದೆಂದರೆ ಪದ್ದಿ ಇಷ್ಟು ಬೇಗ ತಾಯಾಗುತ್ತಿರುವದು ಹಾಗೂ ಎಲ್ಲರೂ ಅವಳನ್ನು ಮೆರೆಸುತ್ತಿರುವದು ನಾದಿನಿಗೆ ಸಹಿಸಲು ಸಾದ್ಯವಾಗದೆ ಹೀಗೆ ಪ್ರಾಣ ತೆಗೆಯುವ ಕೆಲಸ ಮಾಡಿದ್ದಳು . ಎರಡು ಅಮಾಯಕ ಜೀವಗಳ ಬಲಿಯಾಗಿತ್ತು . ಬಹುಶಃ ಇವತ್ತು ಪದ್ದಿಯ ಮಗನೋ ಮಗಳೋ ಜೇವಂತವಾಗಿದ್ದರೆ ಮದುವೆಯ ವಯಸ್ಸಿಗೆ ಬಂದಿರುತ್ತಿದ್ದರು . ಇವತ್ತು ವರಮಹಾಲಕ್ಶ್ಮಿ ಹಬ್ಬ ಇವತ್ತು ಪದ್ದಿಯ ನೆನಪಾಗಿ ಕಣ್ತುಂಬಿ ಬಂತು . ಅವಳಿದ್ದರೆ ಹಬ್ಬಕ್ಕೆ ನನ್ನನ್ನೂ ಕರೆಯುತ್ತಿದ್ದಳೇನೋ ..ಕೊನೆಗೆ ಸಿಹಿತಿಂಡಿಯಾದರೂ ಕಳಿಸುತ್ತಿದ್ದಳೇನೋ…
ಮಿಸ್ ಯು ಪದ್ಮ ..!
Voting Section
Click on a star to vote.
0 / 5. Vote count: 0
No votes so far! Be the first to rate this post.