0
(0)
ಹಸಿದವರ ತುತ್ತು,
ಶ್ರಮಿಕರ ದುಡಿಮೆ.
ರೈತರ ಭೂಮಿ,
ಯುವಕರ ಕನಸು.
ಹೆಣ್ಣಿನ ಧ್ವನಿ,
ಶೋಷಿತರ ಉಸಿರು.
ಸಾಮಾನ್ಯರ ಬದುಕು
ಎಲ್ಲವನ್ನೂ ಕಸಿಯುತ,
ಮೋಸ ವಂಚನೆಯ ಜಾಲವನ್ನು
ನಿತ್ಯವೂ ಹೊಸೆಯುತ,
ನನ್ನದಂತೂ ನನ್ನದೇ
ಬೆರೆಯವರದೆಲ್ಲವೂ ನನ್ನದೇ ಎನ್ನುತ,
ತಿನ್ನುತ ,ತೇಗುತ
ನುಂಗುತ ,ನೊಣೆಯುತ
ಎಲ್ಲವನು ಆಪೋಷನಗೈದರೂ
ಎಂದೆಂದಿಗೂ ಇಂಗದ ಹಸಿವಿನ
ನಮ್ಮ ನಾಯಕರು,ನೇತಾರರು.
ಅಂಧಶ್ರದ್ಧೆ, ಮೂಢನಂಬಿಕೆ
ಇವುಗಳನೆ ಬಂಡವಾಳ ಮಾಡಿಕೊಂಡು,
ಧರ್ಮ ಜಾತಿಗಳ ಗುತ್ತಿಗೆಯ ಪಡೆದು,
ಬೆಸೆಯುವುದು ಬಿಟ್ಟು
ಸಮಾಜವನು ಒಡೆದು,
ಯಾಗ ಯಜ್ಞಗಳಲಿ
ತಿಳುವಳಿಕೆಯ ಬಲಿ ಕೊಡುತ,
ಅಡ್ಡಪಲ್ಲಕಿಗಳಲ್ಲಿ ಮೆರೆಯುತ,
ಶಿಕ್ಷಣದಾಸೋಹದ ಹೆಸರಿನಲ್ಲಿ
ವ್ಯಾಪಾರಗೈಯುತ,
ಲಂಪಟತನ ಮೈಗೂಡಿಸಿಕೊಂಡು,
ಬೆಳಕಾಗ ಬೇಕಾದ ಇವರು,
ಕತ್ತಲೆಯನ್ನು ಸೂಸುವ,
ಸರ್ವಸಂಗ ಪರಿತ್ಯಾಗಿಗಳು.
ಸಂತ ಸ್ವಾಮಿ ವೈರಾಗಿಗಳು.
ಅಮಾಯಕರನು
ಬಗ್ಗು ಬಡಿಯುತ,
ಅಪರಾಧಿಗಳ
ಬೆಂಗಾವಲಿಗೆ ನಿಲ್ಲುತ,
ರಕ್ಷಣೆ ಬದಲಾಗಿ
ಭೀತಿಯನು ಮೂಡಿಸುತ,
ನ್ಯಾಯ ಅನ್ಯಾಯಗಳ
ಸೂಕ್ಷ್ಮತೆಯನು ಮರೆತ,
ಸ್ಪಂದನೆ ಮತ್ತು ಮಿಡಿತದ
ಅರಿವನ್ನು ಹರಿದು,
ವ್ಯವಸ್ಥೆಯ ಕ್ರೌರ್ಯವನು
ಅಡಿಗಡಿಗೆ ಹೊರಚಾಚುತ,
ದ್ವಂದ್ವ ,ವೈರುಧ್ಯಗಳನು
ಮರೆಮಾಚುತ
ಜನರ ಧ್ವನಿ ಅಡಗಿಸಿ,
ಎಲ್ಲರನ್ನು ಮೂಕರಾಗಿಸಿ
ಕುರುಡರಂತೆ ,
ಕಿವುಡರಂತೆ ವರ್ತಿಸುವ
ಆರಕ್ಷಕರು, ನ್ಯಾಯವಾದಿಗಳು.
ಉತ್ತರಕುಮಾರನಂತೆ
ಇಲ್ಲದ ಪೌರುಷ ಮೆರೆಯುತ,
ನಿಷ್ಕ್ರಿಯತೆಯ
ಮುಸುಕನು ಹೊದ್ದು,
ಕರ್ತವ್ಯಗಳ ಮರೆತು
ಹಕ್ಕುಗಳ ಮಂಡಿಸುವ,
ಸುತ್ತಲಿನ ಆಗುಹೋಗುಗಳ
ಪರಿಧಿಯ ಆಚೆ ನಿಂತು,
ಪಾಲುದಾರಿಕೆಯ ಹೊಣೆಯನು
ನಿರಾಕರಿಸುತ,
ಯಾರ ಏಳಿಗೆಗೂ
ಯಾವೊಂದು ಕೊಡುಗೆಯನು ನೀಡದ,
ಕಣ್ಣು ಮುಚ್ಚಿಕೊಂಡು
ಕೈಕಾಲು ಚಾಚಿ ಮಲಗಿರುವ
ನಾಗರಿಕರು ,ಜನಸಾಮಾನ್ಯರು.
ಖಾಕಿ, ಖಾದಿ, ಕಾವಿಗಳು
ನಾನು, ನೀವು, ಅವನು, ಅವಳು.
ಇಲ್ಲಿ ಎಲ್ಲರೂ ತಾಲಿಬಾನಿಗಳೇ
ಹೌದು ,ಪ್ರತಿಯೊಬ್ಬರೂ ತಾಲಿಬಾನಿಗಳು.
Voting Section
Click on a star to vote.
0 / 5. Vote count: 0
No votes so far! Be the first to rate this post.