ನಿಟ್ಟುಸಿರು
ಅದೆಷ್ಟು ಸಹಿಸಿಕೊಂಡೇ ನನ್ನವ್ವ
ಸಂಸಾರದ ಬಂಡಿ ಸಾಗಿಸಬೇಕೆಂಬ ಛಲದವ್ವ
ಜರಿವ ಅಪ್ಪನ ಬಿರುನುಡಿಗಳೆಷ್ಟೋ
ಕೋಪತಾಪಗಳ ಬಿಸಿ ದಂಡನೆಗಳೆಷ್ಟೋ
ಕಂದಮ್ಮಗಳ ಬಿಗಿದಪ್ಪಿ ಸುರಿಸಿದ ಕಣ್ಣೀರುಗಳೆಷ್ಟೋ
ಹಗಲು-ರಾತ್ರಿ ಕಳೆದ ಮನಸ್ಸಿನ ಭಾರಗಳೆಷ್ಟೋ
ಅದೆಷ್ಟು ಸಹಿಸಿಕೊಂಡೆ ನನ್ನವ್ವ
ಪುಟ್ಟ ಪುಟ್ಟ ನಾಲ್ಕೈದು ಜೀವಗಳ ಭಾರಹೊತ್ತು
ಬೆಟ್ಟಗುಡ್ಡಗಳ ನಡುವಿನ ಸೌದೆರಾಶಿ ಹೊತ್ತು
ಮನೆಮನೆಗೆ ಮಾರಿದ ಆಣೆ ಲೆಕ್ಕದ ತುತ್ತು
ಗಂಜಿ ಅಂಬಲಿಗಳನ್ನುಂಡು ಮಲಗುವಾಗಿನ ಹೊತ್ತು
ಅದೆಷ್ಟು ಸಹಿಸಿಕೊಂಡೆ ನನ್ನವ್ವ
ಕನಸುಗಳ ಕಟ್ಟಿ ಬೆಳೆಸಿದೆ ನಿನ್ನ ಕಂದಮ್ಮಗಳ
ಸುಖವ ಬಯಸಿ ಅರಳಿಸಿದೆ ಕುಸುಮಗಳ
ಬದುಕು ಭಾರವ ಹೊರುವ ಆಸರೆಗಳ
ಎದೆಯೆತ್ತರ ಬೆಳೆಸಿ ಓದಿಸಿದೆ ನಿನ್ನುಸಿರುಗಳ
ಅದೆಷ್ಟು ಸಹಿಸಿಕೊಂಡೆ ನನ್ನವ್ವ
ಪಟ್ಟಣದೊಳಗೆ ನೌಕರಿ ಮಾಡ್ತಾರೆ ಮಕ್ಕಳು
ಫೋನ್ ಮಾಡಿ ವಿಚಾರಿಸ್ತಾರೆ ಮೊಮ್ಮಕ್ಕಳು
ಒಂದೊತ್ತುಂಬಾಗ ಹತ್ತಿರವಿದ್ದ ಮಕ್ಕಳು
ಎರಡೊತ್ತುಂಬಾಗ ಜೊತೆಗಿಲ್ಲ ಮೊಮ್ಮಕ್ಕಳು
ಅದೆಷ್ಟು ಸಹಿಸಿಕೊಂಡೆ ನನ್ನವ್ವ
ಆ ಕಾಲ ಈ ಕಾಲ ನನ್ನವ್ವಗೆ ಒಂದೇ ಆಯ್ತಲ್ಲ
ತುತ್ತಿಲ್ಲದ ಕಾಲಕ್ಕಿಂತ
ತುತ್ತುಣ್ಣುವಾಗಿನ ನೋವೇ ಜಾಸ್ತಿ ಆಯ್ತಲ್ಲ
ನಾ ಪಡೆದುಕೊಂಡಿದ್ದಿಷ್ಟೆಂದು ನಿಟ್ಟುಸಿರೇ ಬಿಡುವಂತಾಯ್ತಲ್ಲ
ಅದೆಷ್ಟು ಸಹಿಸಿಕೊಂಡೆ ನನ್ನವ್ವ
ಸಂಸಾರದ ಬಂಡಿ ಸಾಗಿಸಲೇಬೇಕೆಂಬ ಛಲದವ್ವ
ರಚನೆ : ರಾಮಾ ನಾಯ್ಕ್ , ಕುಮಟಾ
ಶಿಕ್ಷಕರು,
ಮಣಿಪಾಲ್ ಇಂಟರ್ನ್ಯಾಷನಲ್ ಸ್ಕೂಲ್, ಬೆಂಗಳೂರು -99
Voting Section
Click on a star to vote.
5 / 5. Vote count: 13
No votes so far! Be the first to rate this post.